ನಿನ್ನ ದೇವರೂ ಬದಲಾಗುತ್ತಾನೆ…!

Franz Von Stuck ಚಿತ್ರ; wind and wave

Franz Von Stuck ಚಿತ್ರ; wind and wave

ಹೃದಯದೊಳಗೆ ಏಳುವ
ಸುನಾಮಿಗೆ ಅದೆಷ್ಟು ಬಾರಿ
ಸತ್ತೆನೋ?
ಚಿತೆಯೂ ಇಲ್ಲದೆ
ಉರಿಯುವ ಸುಖದ
ಕೊಳ್ಳಿಯ ಕಾಲವೆಷ್ಟು?

ತಕ್ಕಡಿಗಳು
ನಡುಗುತ್ತಿವೆ
ನನ್ನ ಗಾಯಗಳ ತೂಕ ಹಾಕಲು

ಲೋಕದ ಯಾವ ಗಾಯಗಳಿಗೂ
ತೂಕದ ಲೆಕ್ಕವಿಲ್ಲ….

ಮನುಷ್ಯನ ಶಕ್ತಿಗಳ
ಎತ್ತರ ಬಲ್ಲವರೇ
ಬಲಹೀನತೆಗಳ
ಆಳದ ಅಳತೆ ಹೇಳಿ

ಗಾಯಗಳೇನೋ
ಬಲಹೀನತೆಗಳೇನೋ
ಸತ್ತುಹೋಗಬಹುದು
ಆಗಾಗ್ಗೆ
ಆದರೆ
ಗಾಯದ ಕಲೆಗಳು
ಬಲಹೀನತೆಯ
ಅವಮಾನಗಳ
ಆಯಸ್ಸು
ಈ ಬದುಕನ್ನೂ ದಾಟುವುದು
ಯಾರ ಹೆಗಲ ಹೊಣೆ….?

ಅಮೃತತ್ವದ ಹನಿಗಳಿಗೆ
ನಾಲಗೆ ಚಾಚಿದವರ
ಎದೆಯಲ್ಲಿ
ವಿಷದ ಹನಿಗಳೇಕೆ
ಒಣಗಿಲ್ಲ?

ನೀನು ಪಾತಾಳ ಲೋಕದಲಿ
ಬೆಳೆವ ಬೆಳೆ
ಪರಿಪೂರ್ಣವಾದ ಮೇಲೆ
ಹೊರಬರುವುದು!

ಭೂ, ಆಳದ ಯಾವ ಬೆಳೆ
ಬಲಿಯುವುದ
ಬಲ್ಲವರಿಲ್ಲ….

ಅಂತೆಯೇ ನಿನ್ನ
ದೇವರೂ ಬದಲಾಗುತ್ತಾನೆ
ಅಲ್ಲಿಯ ತನಕ
ಮೊರೆ ನಿನ್ನ ಹೊರೆಯಷ್ಟೇ…..

~ ಚಕ್ರವರ್ತಿ ಚಂದ್ರಚೂಡ್‌

Advertisements

ಬಾಬಾ, ಇನ್ನೂ ಬಾಗಿಲಲ್ಲೇ ನಿಂತಿದ್ದೇವೆ ನಾವು….

ನೀನಂದು ತೆರೆಸಿದ
ಗುಡಿಗೋಪುರಗಳ
ಬಾಗಿಲಲ್ಲೇ ನಿಂತಿದ್ದೇವೆ ನಾವು….

ಪಂಚಭೂತಗಳ -ಗಾಳಿ,ನೀರು
ಮಣ್ಣು,ಆಕಾಶಗಳ ಹಕ್ಕು ಹಂಚಿದವನು
ನೀನು…

ನಮ್ಮ ಬದುಕುಗಳನು ಬೆಳಕಿಂದ
ಕೆತ್ತಿದ ಶಿಲ್ಪಿಯೇ
ನಿನಗೆ ಮುಗಿದ ಕೈಗಳನು
ಇನ್ನಾವ ಶಿಲೆಯೆದುರೂ
ನಾವು ಜೋಡಿಸಲಾರೆವು…

ಭಗವದ್ಗೀತೆ , ಕುರಾನು, ಬೈಬಲ್ಲುಗಳ
ತಬ್ಬಿದವರು, ತಳ್ಳಿದವರ
ತಲೆ ಮೇಲಿರೋದು
ನೀ ನಮಗಾಗಿ ಬರೆದಿಟ್ಟ
ಸಂವಿಧಾನವೆಂಬ ದಮ್ಮ ಗ್ರಂಥ….

ಲೋಕಕೆ ಸೂತಕವಾದ
ನಮ್ಮ ಕೇರಿಗಳಲಿ ನೀ ಹಚ್ಚಿದ
ಒಂದೊಂದು ದೀಪವೂ
ಸೂರ್ಯಪರ್ಯಾಯ….

ಅವತಾರ ಪುರುಷರೆಲ್ಲ ಕೊಟ್ಟಿದ್ದು
ಪಂಚಭೂತಗಳ ಪೂಜೆ ಮತ್ತು
ಪಾಲಿಸಲೊಂದು ಗ್ರಂಥ……
ಅಷ್ಟೇ ತಾನೆ…?

ನೀ ಬಿತ್ತಿದ ಮನುಷ್ಯತ್ವದ ಬೀಜಗಳೆಲ್ಲ
ಇಂದು ಶಾಶ್ವತ ನೆರಳಿನ ಸಾಲುಮರಗಳಾಗಿವೆ..

ನಿನ್ನ ದಾರಿಯ ಮಂಡೇಲರೆಲ್ಲ ಮಾಯವಾಗುತ್ತಿರುವ
ಈ ಹೊತ್ತಲ್ಲಿ,
ನಮ್ಮೆಲ್ಲರ ಕಣ್ಣೀರೆಲ್ಲ ಅಂದಿನಿಂದಿಲೂ
ನಿನ್ನ ಕಿವಿಯಲ್ಲಿ ಪಿಸುಗುಡುವ ದನಿ
ಮತ್ತೆ ಕೇಳುತಿದೆ…

“ಬಾಬಾ ನಿನ್ನ ಹಾಗೆ ಇಲ್ಲಿ
ಯಾರೂ ಇಲ್ಲ….”

ಸಾಹಿತ್ಯದ ’ಸಂಭ್ರಮ’ ಕುರಿತು….

ಧಾರವಾಡದಲ್ಲಿ ನಡೆದಿದ್ದು ‘ಸಂಭ್ರಮ’ ಅಷ್ಟೇ. ಸಂಭ್ರಮಗಳು ಯಾವತ್ತೂ ಹಣ ಪೋಲು ಮಾಡುವಂಥವು. ರಸಿಕತೆಗೆ ಇರುವಂಥವೇ ಹೊರತು ವೈಚಾರಿಕತೆಗಲ್ಲ.
“ಇದೊಂದು ಪಂಥಾತೀತವಾದ ಸಾಹಿತ್ಯ ಸಂಭ್ರಮ!” ಎಂಬ ಉದ್ಗಾರ ಕೇಳಿ ಬಂದಿದ್ದು ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ. ಈ ಉದ್ಗಾರ ಮೆಚ್ಚುಗೆಯೋ ಸಮಜಾಯಿಷಿಯೋ ಅನ್ನೋದಿನ್ನೂ ಸ್ಪಷ್ಟವಾಗುತ್ತಿಲ್ಲ. ಮೊನ್ನೆ ಮೊನ್ನೆ ನಡೆದ ಆಳ್ವಾಸ್ ನುಡಿಸಿರಿಯನ್ನು ಜರೆದ ಬಹುತೇಕ ಮುಖಗಳು ಈ ಸಂಭ್ರಮದಲ್ಲಿ ಕಾಣಿಸಿಕೊಂಡಿದ್ದೊಂದು ಸೋಜಿಗ. ನುಡಿಸಿರಿಯಲ್ಲಿ ಬಲಪಂಥೀಯ ವಾಸನೆಯಿತ್ತು ಅಂತ ದೂರಿದವರೂ ಬರಗೂರರು ಅದರಲ್ಲಿ ಪಲ್ಗೊಂಡರೆಂದು ಹಳಹಳಿಸಿದವರೂ ಇತ್ತ ಅನಂತಮೂರ್ತಿ ಮತ್ತು ಭೈರಪ್ಪ ಒಟ್ಟಿಗೆ ಇರಬೇಕಾಗಿ ಬಂದ ಸಂದರ್ಭವನ್ನ ಸಹಿಸಿಕೊಂಡು ಅದಕ್ಕೆ ‘ಪಂಥಾತೀತ’ ಎಂಬ ಹಣೆಪಟ್ಟಿ ಹಚ್ಚಿದ್ದೊಂದು ತಮಾಷೆ. ನುಡಿ‘ಸಿರಿ’ಯನ್ನು ಪ್ರತಿಭಟಿಸಿ ‘ಜನ’ನುಡಿಯನ್ನು ಆಯೋಜಿಸಿದ ಸಂವೇದನಾಶೀಲ ಮನಸುಗಳು ಅದೆಷ್ಟು ಸುಸ್ತಾಗಿ ಹೋಗಿದ್ದಾವೆಂದರೆ, ಸಾಹಿತ್ಯ ‘ಸಂಭ್ರಮ’ಕ್ಕೆ ಪ್ರತಿಯಾಗಿ ಈ ಬಾರಿ ಗಟ್ಟಿಯಾದ ದನಿ ಹೊರಡಿಸಲೇ ಇಲ್ಲ. ಕಳೆದ ಬಾರಿ ಕೇಳಿಬಂದ ಬಂಡಾಯದ ದನಿಗಳ ಕಾಲು ಭಾಗದಷ್ಟೂ ಈ ಬಾರಿ ಹೊರಬಿದ್ದಿಲ್ಲ. ಅಥವಾ ಕೆಲವು ಪ್ರತಿಭಟನೆಗಳೂ ಪೂರ್ವಗ್ರಹ ಪೀಡಿತವೂ ಸ್ವಹಿತ ಸಾಧಕವೂ ಆಗಿರುತ್ತವೇನೋ.
ಈ ಬಾರಿ ಸಾಹಿತ್ಯ ಸಂಭ್ರಮದಲ್ಲಿ ಪಾಲ್ಗೊಂಡ ಗಣ್ಯ ಸಾಹಿತಿಗಳ ಪಟ್ಟಿಯನ್ನು ನೋಡಿದರೆ ದಿಗಿಲಾಗುತ್ತದೆ. ಇವರಲ್ಲಿ ಕೆಲವರು ‘ದೇಶಕಾಲ’ವು ಅದ್ದೂರಿಯ ವಿಶೇಷ ಪುರವಣಿ ಹೊರತಂದಾಗ ಪ್ರತಿರೋಧ ತೋರಿದವರು. ವಿಶೇಷ ಸಂಚಿಕೆಯ ಹುನ್ನಾರಗಳನ್ನು ಹುಡುಕಿ ಚರ್ಚಿಸಿದವರು. ಮತ್ತೆ ಕೆಲವರು ‘ಪಂಥಾತೀತ’ ಅನ್ನುವ ಪರಿಕಲ್ಪನೆಯೇ ಪೊಳ್ಳು, ಸಂವೆದನಾಶೀಲನಾದವನು ಯಾವುದಾದರೂ ಪಂಥಕ್ಕೆ ಬದ್ಧನಾಗಿರಬೇಕಾಗುತ್ತದೆ. ಅದರಲ್ಲಿಯೋ ಸಂವೇದನಾಶೀಲತೆಗೆ ಎಡಪಂಥವೇ ಸೂಕ್ತ ಎಂದು ನಂಬಿ, ಅದನ್ನೆ ಬೋಧಿಸುವಂಥವರು. ಯಾವ ಸಭೆ, ಸಮ್ಮೇಳನ, ಗೋಷ್ಟಿ ಅಂದಾಗಲೂ ‘ಬರ, ನೆರೆ, ಶೋಷಣೆಗಳ ಕಾಲದಲ್ಲಿ ಇದೆಂಥ ಅವಮಾನ?’ ಎಮದು ಕಳಕಳಿಯಿಂದ ಕೇಳಿದ್ದವರು! ಒಂದಲ್ಲ ಒಂದು ಬಾರಿ ‘ಎಲೈಟ್’ ಕ್ಲಾಸಿನಲ್ಲಿ ಕಾಣಿಸಿಕೊಳ್ಳುವ ಬಯಕೆ ಹೀಗೆಲ್ಲ ಮಾತು ಮರೆಸುತ್ತದೆಯೇ!? ಕದಂಬೋತ್ಸವದ ಕವಿಗೋಷ್ಟಿಯ ಆಶಯ ಭಾಷಣದಲ್ಲಿ ವಿನಯಾ ಒಕ್ಕುಂದ ಈ ಮಾತನ್ನು ಎತ್ತಿ ಆಡಿದ್ದರು. ಈ ಸಾಹಿತ್ಯ ಸಂಭ್ರಮದ ಸಾರ್ಥಕತೆಯನ್ನು ಪ್ರಶ್ನಿಸಿದ್ದರು.
ಸಂಭ್ರಮದ ಕಾಲವೇ?
ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ೨೦೧೨ರ ಜಯಪುರ ಲಿಟರರಿ ಫೆಸ್ಟಿವಲ್ ಮೂಲ ಪ್ರೆರಣೆ. ಅಲ್ಲಿಗೆ ಹೋಗಿ ಅಷ್ಟೇನೂ ಮನ್ನಣೆ ಪಡೆಯದೆ ನಿರಾಶರಾಗಿ ಮರಳಿದ ಕೆಲವರು ಸೇರಿ ಕನ್ನಡದಲ್ಲೂ ಅಂಥದೊಂದನ್ನು ಆಯೋಜಿಸುವ ಯೋಜನೆ ಮಾಡಿದರು. ಶುರುವಲ್ಲಿ ಅದು ಪಕ್ಕಾ ಅಂಧಾನುಕರಣೆ. ಎಷ್ಟೆಂದರೆ, ಕಾರ್ಯಕ್ರಮದಲ್ಲಿ ಯಾರೂ ಮಾತಾಡಬಾರದು, ಶಿಸ್ತು ಪಾಲಿಸಬೇಕು – ಎಂಬೆಲ್ಲ ಒಕ್ಕಣೆಯನ್ನು ಕರಪತ್ರದಲ್ಲಿ ಒಳಗೊಳ್ಳುವಷ್ಟು! ಶುಲ್ಕ ಹಾಗೂ ಬಿಗಿಯಾದ ನಿಯಮವಾಳಿಗಳಿಂದ ಕೂಡಿದ್ದ ಈ ಸಂಭ್ರಮಕ್ಕೆ ಕಳೆದ ವರ್ಷ ಭಾರೀ ಪ್ರತಿರೋಧ ವ್ಯಕ್ತಗೊಂಡು ಸಾಕಷ್ಟು ಚರ್ಚೆಯೂ ಆಗಿತ್ತು. ಆದರೆ ಉಳ್ಳವರ ನೆರಳಲ್ಲಿ ನಡೆಯುವ ಈ ಸಂಭ್ರಮ ಬಂಡಾಯಗಾರರ ಸದ್ದಡಗಿಸಿದೆ. ಅಥವಾ ಈ ಬಾರಿ ಸಂವೇದನಾಶೀಲರ ಆಶಾಕಿರಣದಂತಿದ್ದ ಪತ್ರಿಕೆಯೊಂದು ಅದರ ಸಹಯೋಗ ವಹಿಸಿದ್ದೂ ಈ ಮೌನಕ್ಕೆ ಕಾರಣವಿರಬಹುದು.
ಈ ಮೂರು ದಿನಗಳ ಸಂಭ್ರಮದಲ್ಲಿ ವಿಭಿನ್ನ ಗೋಷ್ಟಿಗಳು ಆಯೋಜನೆಗೊಂಡಿದ್ದು ಹೌದು. ಆದರೆ ಅದರ ಪ್ರಯೋಜನವನ್ನು ಕುರಿತು ಚರ್ಚಿಸುವ ಅಗತ್ಯವಿದೆ. ಹೇಳುಗರೂ ಕೆಳುಗರೂ ಒಂದೇ ಬಗೆಯವರಾದಾಗ ಅಥವಾ ಹೇಳುವವರು ಮತ್ತು ಕೇಳುವವರು ಈ ಚರ್ಚೆಗಳನ್ನು ಎಲ್ಲಿ ಬೇಕಾದರೂ ಕೈಗೊಳ್ಳುವ ಸಾಧ್ಯತೆ ಇದ್ದಾಗ ಸರ್ಕಾರದ ಪ್ರಾಯೋಜನೆ ಮತ್ತು ದಿನಪತ್ರಿಕೆಯೊಂದರ ಸಹಯೋಗದಲ್ಲಿ ಇಂಥದೊಂದು ಸಂಭ್ರಮದ ಅಗತ್ಯವಾದರೂ ಏನಿತ್ತು ಎನ್ನುವ ಪ್ರಶ್ನೆ ಹುಟ್ಟುತ್ತದೆ.
ಅಲ್ಲದೆ ಈಚೆಗಷ್ಟೇ ಕೊಡಗಿನಲ್ಲಿ ಸಾಹಿತ್ಯ ಸಮ್ಮೇಳನ ನಡೆದಿದೆ. ಜನವರಿ ಅಂತ್ಯದಿಂದ ಕೆಲ ತಿಂಗಳುಗಳ ವರೆಗೆ ಅಲ್ಲಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ನಿಕ್ಕಿಯಾಗಿವೆ. ಸಂಭ್ರಮದಲ್ಲಿ ನಡೆಸಿದ ಚರ್ಚೆಗಳನ್ನೇ ಹಂಚಿಕೊಂಡು ಈ ಸಮ್ಮೇಳನಗಳಲ್ಲಿ ಯಾಕೆ ಕೈಗೊಳ್ಳಬಾರದು? ಆಗ ವಿವಿಧ ಭಾಗಗಳ ಸಾಹಿತ್ಯಾಸಕ್ತರೂ ಸೃಜನಶೀಲರೂ ಅದರಲ್ಲಿ ಒಳಗೊಳ್ಳಲು ಅನುಕೂಲವಾಗುತ್ತದೆ. ಆದರೆ ಅಂತಹ ಒಳಗೊಳಿಸಿಕೊಳ್ಳುವಿಕೆಯ ಯಾವುದೇ ಉದ್ದೇಶ ಸಂಭ್ರಮದ ಆಯೋಜಕರಿಗೆ ಇದ್ದಂತಿಲ್ಲ. ಇಷ್ಟಕ್ಕೂ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಲಿ ಎಂಬ ಉದ್ದೇಶದಿಂದಲೇನೂ ಇದರ ಆಯೋಜನೆ ಆಗಿಲ್ಲವಲ್ಲ? ಇದರದ್ದೇನಿದ್ದರೂ ’ಸಂಭ್ರಮ’ ಅಷ್ಟೇ. ಸಂಭ್ರಮಗಳು ಯಾವತ್ತೂ ಹಣ ಪೋಲು ಮಾಡುವಂಥವು. ರಸಿಕತೆಗೆ ಇರುವಂಥವೇ ಹೊರತು ವೈಚಾರಿಕತೆಗಲ್ಲ.
ಚರ್ಚೆಯಲ್ಲೇನಿತ್ತು?
ನಾಟಕ ಹುಟ್ಟುವ ರೀತಿ, ಮಕ್ಕಳ ಸಾಹಿತ್ಯಕ್ಕೆ ಹೊಸ ತಿರುವು, ಯುವ ಬರಹಗಾರರ ಸವಾಲುಗಳು, ಸಾಹಿತಿಗಳೊಂದಿಗೆ ಸಂವಾದ, ನಾನು ಮಚ್ಚಿದ ಇತ್ತೀಚಿನ ಕನ್ನಡ ಪುಸ್ತಕ, ಬೇಂದ್ರೆ-ಕುವೆಂಪು ಅವರ ಕವಿತೆಗಳ ವಾಚನ, ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಗಳು, ಜನಪ್ರಿಯ ಸಾಹಿತ್ಯದ ಸಾಂಸ್ಕೃತಿಕ ಆಯಾಮಗಳು, ಹಳೆಗನ್ನಡ ಕಾವ್ಯದ ಓದು ಏಕೆ ಬೇಕು, ಸಾಹಿತ್ಯಿಕ ಪ್ರಸಂಗಗಳ ನಿರೂಪಣೆ, ವಿದ್ಯುನ್ಮಾನ ಮಾಧ್ಯಮ ಮತ್ತು ಸಾಹಿತ್ಯ- ಇವು ವಿವಿಧ ಗೋಷ್ಟಿಗಳ ಚರ್ಚಾ ವಿಷಯಗಳು. ಈ ಯಾವುದರಲ್ಲಿಯೂ ಸಾಹಿತ್ಯವನ್ನು ಸಮಾಜಕ್ಕೆ ಪೂರಕವಾಗಿ ಬೆಳೆಸುವ ಕಾಳಜಿ ಕಾಣಿಸುವುದಿಲ್ಲ. ದಮನಿತರ ದನಿಯನ್ನು ಗುರುತಿಸುವ ಗೋಷ್ಟಿಗಳಿಲ್ಲ. ಮಹಿಳಾ ಸಾಹಿತ್ಯವನ್ನು ಗುರುತಿಸುವ ಅಥವಾ ಮುಂದಿನ ದಿನಗಳಲ್ಲಿ ಲಿಂಗಾತೀತವಾಗಿ ಸಾಹಿತ್ಯ ಕಟ್ಟುವ ಸಾಧ್ಯತೆಗಳನ್ನು ಚರ್ಚಿಸುವ ಗೋಷ್ಟಿಗಳಿಲ್ಲ. ಅಲ್ಪಸಂಖ್ಯಾತರ ಸಾಹಿತ್ಯ ಕೃತಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನ ಚರ್ಚೆಗಳಿಲ್ಲ. ಸರ್ಕಾರಿ ಸಹಭಾಗಿತ್ವದ ಈ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರಿಗೆ ಕನಿಷ್ಠ ಮನ್ನಣೆಯನ್ನೂ ನೀಡಲಾಗಿಲ್ಲ!
ಇಂತಹ ಸಾಹಿತ್ಯ ಸಂಭ್ರಮಗಳ ಆಯೋಜನೆಯೇ ಒಂದು ಅಣಕದಂತೆ ಭಾಸವಾಗುತ್ತದೆ. ಅದೂ ಅಲ್ಲದೆ, ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ರು. ೫೦೦ ಪ್ರವೇಶ ಶುಲ್ಕವಿಧಿಸಿದ್ದು, ಪ್ರತಿನಿಧಿಗಳ ಸಂಖ್ಯೆ ಸೀಮಿತಗೊಳಿಸಲಾಗಿತ್ತು. ಈ ಕೇವಲ ಕೆಲವು ನೂರು ಜನರ ಪಾಲ್ಗೊಳ್ಳುವಿಕೆಯಿಂದ ಕನ್ನಡ ಸಾಹಿತ್ಯದ ಸಂಭ್ರಮಾಚರಣೆ ಸಾಧ್ಯವಾಗುತ್ತದೆ ಎನ್ನುವುದೇ ಒಂದು ಹುಂಬತನದಂತೆ ಅನ್ನಿಸುತ್ತದೆ.
ಈ ಮಾತುಗಳು ಕೇವಲ ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಮಾತ್ರವಲ್ಲ, ದುಂದುಗಾರಿಕೆ, ವೈಭವದ ಅಸಹ್ಯಗಳನ್ನು ಮೆರೆಯುವ ಎಲ್ಲ ಬಗೆಯ ಸಾಹಿತ್ಯಕ ಚಟುವಟಿಕೆಗಳಿಗೂ ಅನ್ವಯಿಸುತ್ತದೆ. ನಮ್ಮ ರಾಜ್ಯದ ಕೆಲವು ಗ್ರಾಮಗಳಲ್ಲಿ ಕನ್ನಡ ಅಕ್ಷರವನ್ನೂ ಗುರುತಿಸಲು ಬರದ ಮಕ್ಕಳು ಇದ್ದಾರೆನ್ನುವ ಈ ಹೊತ್ತಿನಲ್ಲಿ ಕನ್ನಡದ ಹೆಸರಲ್ಲಿ ಹಣ ಪೋಲು ಮಾಡಿ ಸಂಬ್ರಮಿಸುವುದು ಎಷ್ಟು ಅಸೂಕ್ಷ್ಮ! ಸಂವೇದನಾಶೀಲ ಸಾಹಿತಿಗಳು ಈ ಖರ್ಚು ವೆಚ್ಚಗಳನ್ನು ಸೌಲಭ್ಯವಂಚಿತರಿಗೆ ಅಕ್ಷರ ದಕ್ಕಿಸಿಕೊಡಲು ವಿನಿಯೋಗಿಸುವತ್ತ ಇನ್ನಾದರೂ ಮನಸ್ಸು ಮಾಡಲಿ. ಮೊದಲು ಎಲ್ಲರಿಗೂ ಅಕ್ಷರ ಭಾಗ್ಯ ದಕ್ಕಲಿ. ಸಾಹಿತ್ಯದ ಸಂಭ್ರಮ ಅಮೇಲೆ ಮಾಡೋಣವಂತೆ

ಭೈರಪ್ಪನವರನ್ನೆ ಬೈಯೋದ್ಯಾಕೆ ಅಂದ್ರೆ…

ಕನ್ನಡ ಕಾದಂಬರಿ ಲೋಕಕ್ಕೆ ಭೈರಪ್ಪನವರ ಕೊಡುಗೆ ನಗಣ್ಯವೇನಲ್ಲ. ಸಂಖ್ಯೆ ಮಾತ್ರವಲ್ಲ, ಓದಿನ ಒಂದು ರುಚಿಯನ್ನೂ ಅವರು ಸ್ಥಾಪಿಸಿರುವುದು ಹೌದು. ಆದರೆ ಆ ರುಚಿಯು ಸಮಾಜದ ಸ್ವಾಸ್ಥ್ಯ ಕೆಡಿಸುವಲ್ಲಿ ಗಣನೀಯ ಕೊಡುಗೆಯನ್ನೇ ನೀಡಿದೆ.

ಕನ್ನಡ ಸಾಹಿತ್ಯ ಲೋಕ ಕಾಣುತ್ತಿರುವ ವಿಲಕ್ಷಣ ಬರಹಗಾರ ಎಸ್‌.ಎಲ್‌.ಭೈರಪ್ಪ ಮತ್ತೊಮ್ಮೆ ವಿಮರ್ಶೆಗೊಳಗಾಗಿದ್ದಾರೆ. ಅವರ ಅಭಿಮಾನಿಗಳು ಇದನ್ನು ಟೀಕೆ ಅನ್ನಬಹುದೇನೋ. ಆದರೆ ಈ ಬಾರಿ ಮಾತನಾಡಿರುವುದು ಅತ್ಯಂತ ಸರಳ, ನೇರ ಮತ್ತು ಪ್ರಾಮಾಣಿಕ ಸಾಹಿತಿ ನಾ.ಡಿಸೋಜಾ. ಈ ಬಾರಿ ವಿಮರ್ಶಕರ ಮೇಲೆ ಯಾವ ಪೂರ್ವಗ್ರಹ ಅಥವಾ ಹಳೆಯ ದ್ವೇಷಗಳ ಗೂಬೆ ಕೂಡಿಸುವಂತಿಲ್ಲ.
ಭೈರಪ್ಪನವರು ಆಗಾಗ ಹೇಳುವ ಜೋಕ್‌ ಒಂದಿದೆ. ಅದು- “ನನ್ನ ಸಾಹಿತ್ಯ ಈತನಕ ಗಂಭೀರ ವಿಮರ್ಶೆಗೆ ಒಳಪಟ್ಟಿಲ್ಲ” ಅನ್ನೋದು. ಎಂಭತ್ತರ ದಶಕದಿಂದ ಮೊನ್ನೆತನಕ ವಿವಿಧ ವೇದಿಕೆಗಳಲ್ಲಿ, ವಿವಿಧ ಸ್ತರಗಳಲ್ಲಿ ಹಾಗೂ ವಿಭಿನ್ನ ಆಯಾಮಗಳಲ್ಲಿ ಭೈರಪ್ಪನವರ ಸಾಹಿತ್ಯ ವಿಮರ್ಶೆಗೆ ಒಳಪಟ್ಟಷ್ಟು ಬಹುಶಃ ಕನ್ನಡದ ಇನ್ಯಾವ ಬರಹಗಾರರದೂ ಒಳಪಟ್ಟಿಲ್ಲವೇನೋ! ಆದರೆ ಭೈರಪ್ಪ ಹೊಗಳಿಕೆಯನ್ನೆ ವಿಮರ್ಶೆ ಎಂದು ಭಾವಿಸಿರುವುದರಿಂದ ಅವರಿಗೆ ತಮ್ಮ ಬರಹಗಳ ಕುರಿತಾದ ಈ ಯಾವ ಚರ್ಚೆಗಳೂ ಗಂಭೀರ ವಿಮರ್ಶೆ ಅನ್ನಿಸಿರಲಿಕ್ಕಿಲ್ಲ.

ಸ್ವಾಸ್ಥ್ಯ ಕೆಡಿಸುವ ಅಭಿರುಚಿ
ಕನ್ನಡ ಕಾದಂಬರಿ ಲೋಕಕ್ಕೆ ಭೈರಪ್ಪನವರ ಕೊಡುಗೆ ನಗಣ್ಯವೇನಲ್ಲ. ಸಂಖ್ಯೆ ಮಾತ್ರವಲ್ಲ, ಓದಿನ ಒಂದು ರುಚಿಯನ್ನೂ ಅವರು ಸ್ಥಾಪಿಸಿರುವುದು ಹೌದು. ಆದರೆ ಆ ರುಚಿಯು ಸಮಾಜದ ಸ್ವಾಸ್ಥ್ಯ ಕೆಡಿಸುವಲ್ಲಿ ಗಣನೀಯ ಕೊಡುಗೆಯನ್ನೇ ನೀಡಿದೆ. ಆರಂಭದ ಧರ್ಮಶ್ರೀ ಇಂದ ಹಿಡಿದು ಇತ್ತೀಚಿನ ಕವಲು ಕಾದಂಬರಿಯವರೆಗೆ ಅವರು ಜಾತಿ ಮತ್ತು ಹೆಣ್ಣನ್ನು ಬಳಸಿಕೊಂಡಿರುವ, ಬಿಂಬಿಸಿರುವ ಬಗೆ ನೋಡಿದರೆ ಸಂವೇದಶೀಲರ ಒಳಗು ಕುದಿಯುತ್ತದೆ. ಭೈರಪ್ಪನವರ ಜಾತಿ ರಾಜಕಾರಣ ಅವರ ’ದಾಟು’ವಿನ ಅನಂತರ ಜನ ಸಾಮಾನ್ಯರೆದುರು ತೆರೆದುಕೊಳ್ಳುತ್ತ ಹೋಯ್ತು. ಆದರೆ ಸೂಕ್ಷ್ಮಜ್ಞರು ಅದರ ಘಾಟನ್ನು ಅವರ ಮೊದಲ ಕಾದಂಬರಿಯಲ್ಲೇ ಗುರುತಿಸಿದ್ದರು. ಧರ್ಮಶ್ರೀಯಲ್ಲಿ ಕ್ರಿಶ್ಚಿಯನ್ ಹುಡುಗಿಯೊಬ್ಬಳ ರೀತಿ ನೀತಿಗಳು, ಆಕೆ ಹಿಂದೂವಾಗಿ ಮತಾಂತರಗೊಂಡ ನಂತರದ ಬದಲಾವಣೆ ಹಾಗೂ ಈ ಎಲ್ಲಕ್ಕೆ ಬೆಂಬಲವಾಗಿ ನಿಲ್ಲುವ ಸಂಘದ ಪ್ರಚಾರಕ – ಇವು ಕಾದಂಬರಿಯ ಕೇಂದ್ರ ವಸ್ತು. ಇವನ್ನಿಟ್ಟುಕೊಂಡು ಕಾದಂಬರಿ ಹೆಣೆಯುತ್ತ ಹೆಣ್ಣಿನ ಜಾತಿ, ವೇಷಭೂಷಣ ಮತ್ತು ನಡವಳಿಕೆಗಳಿಗೆ ಅಂತಸ್ಸಂಬಂಧ ಕಟ್ಟಿದ್ದ ಭೈರಪ್ಪನವರನ್ನು ತರಾಟೆಗೆಳೆದು ಬಹಳ ಹಿಂದೆಯೇ ಶಿವರಾಮ ಕಾಡನಕುಪ್ಪೆ ಲೇಖನವೊಂದನ್ನು ಬರೆದಿದ್ದರು.

ದ ಡಿಬೇಟರ‍್
ಅಪಾರ ಜನಮೆಚ್ಚುಗೆ ಪಡೆದು ಸಿನೆಮಾ ಆಗಿಯೂ ಜನಪ್ರಿಯಗೊಂಡಿದ್ದ ‘ವಂಶವೃಕ್ಷ’ ಕಾದಂಬರಿಯನ್ನು ಕೀರ್ತಿನಾಥ ಕುರ್ತಕೋಟಿ ‘ನೂರು ದೋಷಗಳಿರುವ ಕಾದಂಬರಿ’ ಎಂದುಬಿಟ್ಟಿದ್ದರು. ಅನಂತಮೂರ್ತಿ ಕೂಡ ವಂಶವೃಕ್ಷ ಒಂದು ನೆಲೆಯಲ್ಲಿ ಸಂಪ್ರದಾಯವಾದಿಗಳ ತಪ್ಪುಗಳನ್ನು ಕೆದಕುತ್ತದೆಯೇ ಹೊರತು ಅದಕ್ಕೆ ಪರಿಹಾರವನ್ನು ಹುಡುಕುವ ಗೋಜಿಗೆ ಹೋಗುವುದಿಲ್ಲ ಎನ್ನುವ ಮೂಲಕ ಅದರ ದೋಷವನ್ನು ತೋರಿಸಿದ್ದರು. ಅನಂತಮೂರ್ತಿಯವರು ಭೈರಪ್ಪನವರನ್ನು ’ಡಿಬೇಟರ‍್’ ಅಂತ ಕರೆಯುತ್ತಾರೆ. ‘ಭೈರಪ್ಪ ನನ್ನ ಜತೆಯ ಬರೆಹಗಾರ. ಆದರೆ ನನಗೆ ಸಾಹಿತ್ಯ ಲೋಕದಲ್ಲಿ ಮುಖ್ಯ ಅನ್ನಿಸಿದವರು ಅವರಲ್ಲ. ಅವರೆಷ್ಟೇ ಜನಪ್ರಿಯ ಆಗಿರಲಿ, ಅವರೊಬ್ಬರು ಡಿಬೇಟರ್. ಜನರ ಮೆಚ್ಚುಗೆಗೆ ಬರುವ ಹಾಗೆಯೇ ಅವರು ಕಾದಂಬರಿಗಳನ್ನು ಬರೆಯುವುದು.’ ಎಂದು ನೇರವಾಗಿಯೇ ಹೆಳಿದ್ದರು ಅನಂತಮೂರ್ತಿ. ಇದು ಆವರಣ ಕಾದಂಬರಿಯನ್ನು ಪ್ರತಿಭಟಿಸಿ ‘ಆವರಣ -ಅನಾವರಣ’ ಕೃತಿ ಬಿಡುಗೊಂಡ ಸಂದರ್ಭದಲ್ಲಿ ಅವರಾಡಿದ ಮಾತುಗಳು. ಕಾಸರವಳ್ಳಿಯವರ ‘ನಾಯಿ ನೆರಳು’ ಸಿನೆಮಾ ನೋಡಿದ  ಸಂದರ್ಭದಲ್ಲಿ ‘ಭೈರಪ್ಪ ರಾಹುಗ್ರಸ್ಥ ಲೇಖಕ. ಆದರೂ ಅವರ ಕೃತಿಗಳಿಗೆ ಮೌಲಿಕ ರೂಪ ನೀಡಿ ಅವರನ್ನು ರಾಹುವಿನಿಂದ ಬಿಡುಗಡೆಗೊಳಿಸುವ ಕೆಲಸವನ್ನು ಗಿರೀಶ್ ಕಾಸರವಳ್ಳಿ ಮಾಡಿದ್ದಾರೆ’ ಎಂದು ವ್ಯಂಗ್ಯವಾಡಿದ್ದರು ಅನಂತಮೂರ್ತಿ.

ಮರಣೋತ್ತರ ನೀಡಬಹುದಿತ್ತು!
ಸಾಹಿತಿಗಳು ಮಾತ್ರವಲ್ಲ, ನಿಡುಮಾಮಿಡಿ ಸ್ವಾಮೀಜಿಯವರ ಮಾತಿನ ಪ್ರಹಾರಕ್ಕೂ ಭೈರಪ್ಪ ಸಿಲುಕಿದ್ದುಂಟು. ಅದು ಚಂದ್ರಶೇಖರ ಕಂಬಾರರಿಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿದ್ದಕ್ಕಾಗಿ ಏರ್ಪಾಟಾಗಿದ್ದ ಅಭಿನಂದನಾ ಸಮಾರಂಭ. ಭೈರಪ್ಪನವರ ಅಂಧಾಭಿಮಾನಿಗಳು ಈ ಸಾರ್ತಿ ಎಸ್‌ಎಲ್‌ಬಿಗೇ ಪ್ರಶಸ್ತಿ ಬರಬೇಕಿತ್ತು ಎಂದು ಅಸಮಾಧಾನ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ, ಸಮಾರಂಭದಲ್ಲಿ ಉಪಸ್ಥಿತರಿದ್ದ ಪತ್ರಕರ್ತರೊಬ್ಬರು ಭಯರಪ್ಪನವರ ಬಗ್ಗೆ ಮಾತಾಡುತ್ತಾ ‘ಅವರೊಬ್ಬ ಭೋಗಸ್ ಸ್ವಾಮೀಜಿ’ ಅಂದಿದ್ದು, ಅದನ್ನು ಅನುಮೋದಿಸಿ ಮಾತಾಡಿದ ನಿಡುಮಾಮಿಡಿ ಸ್ವಾಮೀಜಿಗಳು ‘ಅವರಿಗೆ ಬೇಕಿದ್ದರೆ ಮರಣೋತ್ತರ ಪ್ರಶಸ್ತಿ ನೀಡಬಹುದು’ ಅಂದಿದ್ದೆಲ್ಲವೂ ದೊಡ್ಡ ಸುದ್ದಿಯಾಗಿತ್ತು.
ಇದೀಗ ನಾ.ಡಿಸೋಜಾ ‘ಎಸ್‌.ಎಲ್‌.ಭೈರಪ್ಪ ಅವರು ಉತ್ತಮ ಲೇಖಕರಲ್ಲ. ಹಳೆಯದನ್ನ ಕೆದಕಿ ಬರೆಯುವ ಸಾಹಿತಿ ಎಸ್.ಎಲ್. ಭೈರಪ್ಪ ಅವರು ನನ್ನ ಪಾಲಿಗೆ ಶ್ರೇಷ್ಠ ಲೇಖಕರಲ್ಲ. ಹಳೇ ಗಾಯವನ್ನು ಕೆದಕುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಹೇಳುವ ಮೂಲಕ ಮತ್ತೊಮ್ಮೆ ಭೈರಪ್ಪನವರನ್ನು ವಿಮರ್ಶೆಗೆ ಒಳಪಡಿಸಿದ್ದಾರೆ. ‘ಎಸ್‌.ಎಲ್‌.ಭೈರಪ್ಪ ಅವರ ಕವಲು ಮತ್ತು ಆವರಣ ಕಾದಂಬರಿಗಳು ಮೇಲ್ನೋಟಕ್ಕೆ ವೈಚಾರಿಕತೆಯ ಸೋಗು ಹಾಕಿಕೊಂಡು, ಒಳಗಡೆ ಹಳೆಯ ದ್ವೇಷವನ್ನು ಕೆದಕುವಂತಿವೆ’ ಅನ್ನುವುದು ನಾ.ಡಿಸೋಜಾ ಎತ್ತಿ ತೋರಿಸಿದ ಅಂಶ.

ಕೃತಘ್ನ, ಸಂವೇದನಾ ಹೀನ…
ಬಹುಶಃ ಕನ್ನಡ ಸಾಹಿತಿಗಳಲ್ಲಿ ಭೈರಪ್ಪ ವಿವಿಧ ವರ್ಗಗಳಿಂದ ಬೈಸಿಕೊಂಡಷ್ಟು ಇನ್ಯಾರೂ ಬೈಸಿಕೊಂಡಿಲ್ಲ. ಆವರಣ ಬರೆದ ನಂತರವಂತೂ ಇದು ಬಹುತೇಕ ಎಲ್ಲ ವರ್ಗಗಳನ್ನು ವ್ಯಾಪಿಸಿದೆ. ತಾವು ಬಲಪಂಥೀಯ ಇತಿಹಾಸವನ್ನು ಓದುವಾಗ ಹಾಕಿಕೊಂಡ ಅಡಿಟಿಪ್ಪಣಿಗಳನ್ನೇ ಜೋಡಿಸಿ ಒಂದು ಪುಸ್ತಕ ಬರೆದು, ಅದಕ್ಕೆ ‘ಆವರಣ’ ಎಂದು ಹೆಸರಿಟ್ಟು ಅದನ್ನು ಕಾದಂಬರಿ ಎಂದು ಕರೆದಾಗಲೇ ಭೈರಪ್ಪನವರ ಬಗ್ಗೆ ಅಳಿದುಳಿದಿದ್ದ ಗೌರವ ಕುಸಿದುಬಿದ್ದಿತ್ತು. ನೇರವಾಗಿ ಕೋಮು ಸೌಹಾರ್ದದ ಗೂಡಿಗೆ ಎಸೆದ ಕಿಡಿಗೇಡಿಯ ಕಲ್ಲಿನಂತಿದೆ ಆ ಕೃತಿ. ಅದಕ್ಕೂ ಮುಂಚೆ ಬರೆದಿದ್ದ ಮಂದ್ರವನ್ನು ಅದ್ಯಾವ ಭಾವದಲ್ಲಿ ಓದಿಕೊಳ್ಳಬೇಕು ಅನ್ನೋದೇ ತಿಳಿಯದಾಗಿತ್ತು. ಅತಾರ್ಕಿಕ ಹಾದರದ ಹೆಣಿಗೆ ಕಾದಂಬರಿಯ ವಸ್ತುವಾದರೆ ಅದು ಹೇಗಿರಬಹುದು ಅನ್ನೋದಕ್ಕೆ ಮಂದ್ರ ಒಳ್ಳೆಯ ಉದಾಹರಣೆ. ಈ ಕಾದಂಬರಿಗಾಗಿ ಭೈರಪ್ಪ ಹಿಂದೂಸ್ಥಾನಿ ಸಂಗೀತವನ್ನೆಲ್ಲ ಅಭ್ಯಾಸ ಮಾಡಿ ಪರಿಶ್ರಮ ಹಾಕಿದ್ದರು. ಆದರೆ ಈ ಪರಿಶ್ರಮವೆಲ್ಲ ಮುರಿಯುವಿಕೆಗೆ ಪೋಲಾಯಿತೇ ವಿನಃ ಕಟ್ಟುವಿಕೆಗೆ ಪೂರಕವಾಗಲಿಲ್ಲ.
ಕವಲು ಕಾದಂಬರಿಯಲ್ಲಂತೂ ಭೈರಪ್ಪ ನೇರವಾಗಿ ಹೆಣ್ಣುಮಕ್ಕಳ ಕರುಳಿಗೆ ಕಿಚ್ಚಿಟ್ಟಿದ್ದರು. ಹೋರಾಟದ ದನಿಯನ್ನು ದಮನಗೊಳಿಸುವ ವಿಚಿತ್ರ ಹುಂಬತನ ಆ ಕಾದಂಬರಿಯ ವಸ್ತಿವಿನಲ್ಲಿತ್ತು. ಪದೇ ಪದೇ ‘ಅಗಲ ಬೊಟ್ಟು ಇಟ್ಟುಕೊಳ್ಳುವ’ ಹೆಂಗಸನ್ನ ದೇವಿಯೆಂದೂ ಗಿಡ್ಡ ಕೂದಲಿನ ಸಾಮಾಜಿಕ ಬದುಕಿನಲ್ಲಿರುವ ಹೆಣ್ಣುಗಳನ್ನ ದೆವ್ವಗಳಂತೆಯೂ ಬಿಂಬಿಸಿದ ಈ ಕಾದಂಬರಿ ಭೈರಪ್ಪನ ವಿಕೃತ ಮನಸ್ಸಿಗೆ ಹಿಡಿದ ಕನ್ನಡಿಯಾಗಿತ್ತು.
ಇಷ್ಟೆಲ್ಲ ಮಾಡಿಯೂ ತಮ್ಮನ್ನು ಸಹಿಸಿಕೊಂಡಿರುವ ಕನ್ನಡಿಗರ ಬಗ್ಗೆ ಭೈರಪ್ಪನವರಿಗೆ ಅಂಥಾ ಪ್ರೀತಿಯೇನಿಲ್ಲ. ಮೈಸೂರಿನ ಯಾವುದೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭೈರಪ್ಪ ‘ಕನ್ನಡಿಗರು ತರ್ಲೆಗಳು’ ಅಂದು ಕೆಂಗಣ್ಣಿಗೆ ಗುರಿಯಾಗಿದ್ದರು. ಮತಾಂತರದ ಕುರಿತು ಮಾತಾಡುವಾಗೆಲ್ಲ ಸೋನಿಯಾರನ್ನು ದೂರುತ್ತ ಕಾಂಗ್ರೆಸ್ಸಿಗರ ಮುನಿಸನ್ನೂ ಮೈಮೇಲೆಳೆದುಕೊಂಡರು. ತಮಗೆ ಜ್ಞಾನಪೀಠ ಸಿಗದಾದಾಗ ಸಾಹಿತ್ಯ ಕ್ಷೇತ್ರದ ಲಾಬಿಗಳ ವಿರುದ್ಧವೂ ಬ್ರಾಹ್ಮಣ ವಿರೋಧಿಗಳ ಬಗೆಗೂ ಮಾತಡಿದರು. ಕೊನೆಗೂ ಸರಸ್ವತಿ ಸಮ್ಮಾನ ಸಿಕ್ಕಾಗ ಅದು ಹಿಂದೆ ಎಷ್ಟು ಬಾರಿ ತಪ್ಪಿತ್ತು, ಯಾರೆಲ್ಲ ತಪ್ಪಿಸಿದ್ದರು ಅನ್ನುವ ಲೆಕ್ಕ ಕೊಟ್ಟರು.
ಇಷ್ಟೆಲ್ಲ ಮಾತನಾಡುವ ಭೈರಪ್ಪ ಯಾವತ್ತೂ ನಾಡು ನುಡಿಗಳ ಬಗ್ಗೆ ಕಾಳಜಿಯ ಮಾತುಗಳನ್ನಾಡಿಲ್ಲ. ಜನಪರವಾದ, ಪಕ್ಷಾತೀತವಾದ ಒಂದೇ ಒಂದು ಹೇಳಿಕೆ ಅವರ ಭಾಷಣಗಳಲ್ಲಾಗಲೀ ಬರಹಗಳಲ್ಲಾಗಲೀ ಕಂಡುಬಂದಿಲ್ಲ. ಮತಾಂತರ, ಚಾರಿತ್ರಿಕ ಮುಸ್ಲಿಮ್‌ ದುರಾಚಾರಗಳಿಗೆ ಅವರು ಮಮ್ಮಲ ಮರುಗುವಷ್ಟು ಕಣ್ಣೆದುರಿನ ಅಸ್ಪೃಷ್ಯತೆಗೆ, ಹೆಣ್ಣಿನ ಮೇಲಾಗುತ್ತಿರುವ ಶೋಷಣೆಗೆ ಮರುಗಿಲ್ಲ. ಭಾಷೆಯ ವಿಷಯ ಬಂದಾಗಲೂ ಅಷ್ಟೇ. ಇಂಥಾ ಕೃತಘ್ನ, ಸಂವೇದನಾಹೀನ ಬರಹಗಾರನಿಗೆ ಇರುವ ಅಭಿಮಾನಿಗಳ ಸಂಖ್ಯೆ ನಿಜಕ್ಕೂ ಆತಂಕ ಹುಟ್ಟಿಸುತ್ತದೆ. ಅವರನ್ನು ಮೆಚ್ಚಿ ಮೆರೆಸುತ್ತಿರುವ ವರ್ಗ ಯಾವುದು ಎಂದು ಗಮನಿಸಿದರೆ ಅದರ ಹುನ್ನಾರಗಳೂ ಅದಕ್ಕೆ ಪೂರಕವಾಗಿ ಭೈರಪ್ಪನ ನಡೆಗಳಿರುವುದೂ ಸ್ಪಷ್ಟವಾಗಿಹೋಗುತ್ತವೆ.

*******************
ಭೈರಪ್ಪನ್ನೇ ಬೈಯೋದ್ಯಾಕೆ?
ಕನ್ನಡ ಸಾಹಿತ್ಯ ಲೋಕದಲ್ಲಿ ಭೈರಪ್ಪನವರಷ್ಟು ಬೈಸಿಕೊಂಡವರಿಲ್ಲವೇನೋ. ಭೈರಪ್ಪ ಕೋಮು ದಳ್ಳುರಿಯ, ಹೆಣ್ಣನ್ನು ಹೀನವಾಗಿ ನೋಡುತ್ತ ಅವಳನ್ನು ಸಂಪ್ರದಾಯದ ಸಂಕೋಲೆಯಲ್ಲಿ ಕಟ್ಟಿಹಾಕುವಂತಹ ಸಾಹಿತ್ಯ ರಚಿಸುತ್ತಾರೆ ಅನ್ನೋದು ಅವರ ಮೇಲಿನ ಆಪಾದನೆ. ಈ ಬಗೆಯ ಕೃತಿಗಳನ್ನು ಬಲಪಂಥೀಯ ಸಂಘಟನೆಗಳು ಸಾಕಷ್ಟು ಸೃಷ್ಟಿಸಿವೆ, ಸೃಷ್ಟಿಸುತ್ತಿವೆ. ಆದರೆ ಭೈರಪ್ಪನೇ ಯಾಕೆ ಬಾಯಿಗೆ ತುತ್ತಾಗುತ್ತಿದ್ದಾರೆ? ಇದಕ್ಕೆ ಕಾರಣ ಇಲ್ಲದಿಲ್ಲ. ಭೈರಪ್ಪ ಈ ವಿಚ್ಛಿದ್ರಕಾರಿ ಕೆಲಸವನ್ನು ಸಾಹಿತ್ಯದ ಹೆಸರಲ್ಲಿ ಮಾಡುತ್ತಿದ್ದಾರೆ. ಇವರ ಈ ವಿಕೃತಿ ನೇರ ತೋರಿಕೆಯದ್ದಲ್ಲ. ಕಾದಂಬರಿಯ ಹೊದ್ದಿಕೆಯಲ್ಲಿ ದ್ವೇಷದ ವಿಷ ಬೀಜಗಳನ್ನು ನೆಡುತ್ತಿದ್ದಾರೆ. ಬರಹದ ಮಟ್ಟಿಗೆ ಉತ್ತಮ ಭಾಷೆ ಹಾಗೂ ನಿರೂಪಣಾ ತಂತ್ರವನ್ನು ಬಳಸುವ ಭೈರಪ್ಪ, ಅವನ್ನು ತಮ್ಮ ಈ ಹಿಡನ್‌ ಅಜೆಂಡಾಗಾಗಿ ದುಡಿಸಿಕೊಳ್ಳುತ್ತಿದ್ದಾರೆ. ಹಾಗೆಂದೇ ಭೈರಪ್ಪ ಈತನಕ ಕನ್ನಡ ಸಾಹಿತ್ಯ ಪರಂಪರೆಯ ಪ್ರಮುಖ ಚರ್ಚಾಗೋಷ್ಟಿಗಳಲ್ಲಿ ಒಳಗೊಂಡಿಲ್ಲ. ಅವರ ಕೃತಿಗಳು ಹೆಚ್ಚು ಚರ್ಚೆಯಾಗಿರುವುದು ಅವುಗಳ ದುಷ್ಪರಿಣಾಮದ ನೆಲೆಯಲ್ಲಿಯೇ.

ಅನಧಿಕೃತ ವಕ್ತಾರಿಕೆ
ಸಂಘ ಪರಿವಾರ ಬಹಳ ಚಾಣಾಕ್ಷತೆಯಿಂದ ಕಾರ್ಯ ನಿರ್ವಹಿಸುವ ಅತ್ಯಂತ ಶಿಸ್ತುಬದ್ಧ ಸಂಸ್ಥೆ. ಇಲ್ಲಿನ ಪ್ರಚಾರಕರು ಹತ್ತು ಹಲವು ಕ್ಷೇತ್ರಗಳಲ್ಲಿ ಜನರ ಕಣ್ಣಿಗೆ ನೇರವಾಗಿ ಕಾಣದಂತೆ ಚದುರಿಕೊಂಡಿರುತ್ತಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ನಾರಾಯಣ ಮೂರ್ತಿ, ಸಂಶೋಧನಾ ಕ್ಷೇತ್ರದಲ್ಲಿ ಚಿದಾನಂದ ಮೂರ್ತಿ ಇದ್ದಂತೆ ಸಾಹಿತ್ಯ ಕ್ಷೇತ್ರದಲ್ಲಿ ಭೈರಪ್ಪ ಸಂಘಿಗಳ ಅನಧಿಕೃತ ವಕ್ತಾರಿಕೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಬಲಪಂಥೀಯ ವಾದವು ಸಾರುವ ವರ್ಣಾಶ್ರಮ ಧರ್ಮದ ಬೆಂಬಲ, ಬ್ರಾಹ್ಮಣ್ಯದ ಮೇಲ್ಮೆ, ಸ್ತ್ರೀಯರ ಸ್ವಾತಂತ್ರ‍್ಯ ಹರಣ ಮತ್ತು ಅವರು ಹೇಗಿರಬೇಕೆಂಬ ನಿರ್ದೇಶನ – ಇವಿಷ್ಟನ್ನು ಸೂಚ್ಯವಾಗಿ ಹರಡುವ ಜವಾಬ್ದಾರಿ ಭೈರಪ್ಪನವರ ಪಾಲಿಗಿದೆ. ಅವರು ತಮ್ಮ ಬರಹ ಕೌಶಲ್ಯದ ಮೂಲಕ ಅದನ್ನು ಸಮರ್ಥವಾಗಿ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಫಲವಾಗಿ ಅವರ ಯಾವುದೇ ಕಾದಂಬರಿ ಬಿಡುಗಡೆಯಾದರೂ ಸಾವಿರ ಸಾವಿರ ಸಂಖ್ಯೆಯಲ್ಲಿ ಕೊಂಡು ಸಭೆ ಸಮಾರಂಭಗಳಲ್ಲಿ ಹಂಚುವ ಕೆಲಸವನ್ನು ಕಾರ್ಯಕರ್ತರು ಶ್ರದ್ಧೆಯಿಂದ ಮಾಡುತ್ತಾರೆ. – ಎನ್ನುವಲ್ಲಿಗೆ ಭೈರಪ್ಪನವರ ಪುಸ್ತಕಗಳ ಮುದ್ರಣ ಸಂಖ್ಯೆಯಲ್ಲೂ ಏರಿಕೆಯಾಯ್ತ; ಟೀಆರ್‌ಪಿ ಆಧರಿಸಿ ಜನಪ್ರಿಯತೆ ನಿರ್ಧರಿಸುವಂತೆ ಅವರು ಜನಪ್ರಿಯರೂ ಆದರು; ಅವರ ಬರಹಗಳ ಮೂಲಕ ಬಲಪಂಥೀಯರು ತಮ್ಮ ಬೆಳೆಯನ್ನೂ ಬೇಯಿಸಿಕೊಂಡರು. ಈ ಸರಳ ಸೂತ್ರ ಕಣ್ಣಿಗೆ ರಾಚುತ್ತಿರುವುದರಿಂದಲೇ ಅವರ ವಿರುದ್ಧ ಇಷ್ಟೊಂದು ತಕರಾರುಗಳು ಎದ್ದಿರುವುದು.

‘ಭೈ’ ಬೆಂಬಲಿಗರು
ಕಂಬಾರರಿಗೆ ಜ್ಞಾನ ಪೀಠ ಘೋಷಣೆಯಾದಾಗ ಯಾವ ಕಾರಣಕ್ಕೋ ವಿಪರೀತ ರೇಗಿಕೊಂಡ ಪಾಟೀಲಪುಟ್ಟಪ್ಪ ಈ ಪ್ರಶಸ್ತಿಗೆ ಕಂಬರ ತೀರಾ ಅನರ್ಹ. ಭೈರಪ್ಪನವರಿಗೆ ಸಿಗಬೇಕಾಗಿದ್ದು ರಾಜಕೀಯ ನಡೆದು ಕಂಬಾರರ ಪಾಲಾಗಿದೆ ಎಂದು ಕಾರಿಕೊಂಡಿದ್ದರು. ಇತ್ತೀಚೆಗೆ ನಾ.ಡಿಸೋಜ ಭೈರಪ್ಪ ಶ್ರೆಷ್ಠ ಲೇಖಕರೇನಲ್ಲ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸುತ್ತಾ ಮತ್ತೊಂದು ಸಭೆಯಲ್ಲಿ ಮಾ.ಹಿರಣ್ಣಯ್ಯ ದೊಡ್ಡ ದನಿಯಲ್ಲಿ ಪ್ರತಿಭಟಿಸಿದ್ದರು. ಡಿಸೋಜರಿಗೆ ವೃತ್ತಿ ಮತ್ಸರ. ಭೈರಪ್ಪ ಬರೆಯುವುದರಿಂದ ಡಿಸೋಜಾ ತಿನ್ನುವ ಅನ್ನಕ್ಕೇನು ಕಲ್ಲು ಬಿದ್ದಿದೆಯೇ ಎಂದು ಕೂಗಾಡಿದ್ದರು. ಫೇಸ್‌ಬುಕ್‌ ಜಾಲತಾಣದಲ್ಲಿ ‘ಭೈ’ ಬೆಂಬಲಿಗರು ತಮ್ಮ ಅಸಲಿಯತ್ತು ಏನೆಂಬುದನ್ನು ತಮ್ಮ ಭಾಷಾ ಪ್ರಯೋಗದಿಂದಲೂ ಚಿಂತನೆಗಳನ್ನು ಬಹಿರಂಗಗೊಳಿಸುವುದರಿಂದಲೂ ಖುಲ್ಲಂಖುಲ್ಲಾ ತೋಡಿಕೊಂಡಿದ್ದರು. ೈ

ನಿಮಗೆ ಗೊತ್ತಿರಲೂಬಹುದಾದ್ದು…
* ಭೈರಪ್ಪನವರ ಮೊದಲ ಕಾದಂಬರಿ ಧರ್ಮಶ್ರೀ. ಅದು ಪ್ರಕಟವಾದ ಕಾಲಕ್ಕೇ ಅಂದಿನ ತರುಣ ಸಂವೇದನಾಶೀಲ ಲೇಖಕರು ಅದನ್ನು ಖಂಡಿಸಿದ್ದರು. ಈ ಕಾದಂಬರಿ ಕುರಿತು ಶಿವರಾಮ ಕಾಡನಕುಪ್ಪೆ ಒಂದು ಲೇಖನವನ್ನೂ ಬರೆದಿದ್ದರು.
* ವಂಶವೃಕ್ಷ ನೂರು ದೋಷಗಳಿರುವ ಕಾದಂಬರಿ ಎಂದಿದ್ದರು ಕೀರ್ತಿನಾಥ ಕುರ್ತಕೋಟಿ.
* ದಾಟು ಕಾದಂಬರಿ ಪ್ರಕಟವಾದಾಗ ದಲಿತ ಸಮುದಾಯದ ತೀವ್ರ ಪ್ರತಿರೋಧ ಎದುರಿಸಿದರು ಭೈರಪ್ಪ.
* ಮಂದ್ರ ಕಾದಂಬರಿ ಮೆಚ್ಚುಗೆ ಪಡೆದಷ್ಟೇ ತೆಗಳಿಕೆಯನ್ನೂ ಪಡೆದಿತ್ತು.
* ಆವರಣ ಮತ್ತು ಕವಲು ಕಾದಂಬರಿಗಳು ತಮ್ಮ ಉದ್ದೇಶವನ್ನು ನೇರವಾಗಿಯೇ ತೋರ್ಪಡಿಸಿಕೊಂಡವು. ನಾಡಿನ ಎಲ್ಲ ಪ್ರಜ್ಞಾವಂತರು ಈ ಎರಡು ಕೃತಿಗಳನ್ನು ಕಟುವಾಗಿ ಟೀಕಿಸಿದ್ದರು.

’ಸೂಜಿ’ಯರ ನಿತ್ಯ ಸಾವು

ಈ ಹುಡುಗಿ ಸೌಜನ್ಯ
ಅಲಿಯಾಸು ಸೂಜಿ…..

ಬುಟ್ಟಿಯಲ್ಲಿ
ಕೊಳೆತ ತರಕಾರಿ
ಬಳಸಿದ ಕಾಂಡೋಮು
ಉರಿದ ಕರ್ಪೂರ
ಆರಿ ಹೋದ ಮಂಗಳಾರತಿ
ಆಸಾರಾಮನ ಆಧ್ಯಾತ್ಮ ದ
ಅಮೇಧ್ಯ…

ಮುಟ್ಟಲ್ಲಷ್ಟೇ ಸೋರುವ
ಗರ್ಭಪಾತದ ಗುಟ್ಟುಗಳನ್ನಾದರೂ
ಮಾರುತ್ತಿದ್ದರೆ
ಗಿಟ್ಟುತ್ತಿತ್ತು….

ಈ ಹುಡುಗಿ ಸೌಜನ್ಯ
ಅಲಿಯಾಸು ಸೂಜಿ

ಶ್ರಮದ ಬೆವರ ಘಮಲನ್ನು
ಕಣ್ಣಿರುವ ಕಾಮವನ್ನು
ಮಗುವಿನ ಜೊಲ್ಲನ್ನು….

ಕಾಲಕಾಲಕ್ಕೆ ಅವ್ವನ
ಎಡ-ಬಲ ಮೊಲೆಗಳಿಂದ
ಒಸರುವ ರುಚಿಯ ಸಮಾನತೆಯನ್ನು
ಸೆರಗೊದ್ದು ಎದೆಹಾಲೊಳು ಕುಡಿಸುವ
ಪ್ರಾಮಾಣಿಕತೆಯ
ಪ್ರೋಟೀನನ್ನು…..

ತನ್ನ ಕೆಲಸವಾದರೂ
ಪೋಲಿಮಗನಿಗೆ ಸಿಗಲಿ
ಎಂಬ ಅಪ್ಪನ ಆತ್ಮಹತ್ಯೆಯ
ಕೊನೆಯ ಗಿಫ್ಟನ್ನು….

ಶಬರಿ ರಾಮನಿಗಾಗಿ
ಕಚ್ಚಿಟ್ಟ ಹಣ್ಣುಗಳ ರುಚಿಯನ್ನು,

ಕಲ್ಲಾಗಿ ಹೋದರೂ
ಉಸಿರಾಡುತ್ತಿದ್ದ
ಅಹಲ್ಯೆಯ
ನಂಬಿಕೆಯನ್ನು…

ಖಾಲಿ ಹಾಳೆಗೂ
ಚಿತ್ರಕಾರನಿಗೂ
ಇರುವ ಕಲ್ಪನಾ ಸಂಬಂಧವನ್ನು…..

ಎದೆಯಿಂದೆದ್ದು
ಕಣ್ಣ ಬಿಟ್ಟು ಹೋಗುವ
ಕಣ್ಣೀರಿನ ವಿದಾಯವನ್ನು…..

ಇಂತಹ ಸಾವಿರ ಸಾವಿರ
ಸರಕುಗಳನ್ನು
ಮಾರಲು ಹೋದಳು….

ಪಳಯುಳಿಕೆಗಳ ಖರೀದಿಸಲು
ಪಗಾರ ಸಾಲುವುದಿಲ್ಲ ಅಂದರು
ಜನ……

ಈ ಹುಡುಗಿ ಸೌಜನ್ಯ ಅಲಿಯಾಸು
ಸೂಜಿ ಸುಮ್ಮನಿದ್ದಾಳಾ,
ವರಸೆ ಬದಲಿಸಿದಳು….

ಹೆಗ್ಗಡೆಗಳ ಮನೆಯ ಮುಂದೆ ನಿಂತು
ಸದ್ದು ಮಾಡದ ನ್ಯಾಯದ
ಗಂಟೆ ಮಾರಹತ್ತಿದಳು…

ಅಮ್ಮನವರ ಕಂಠೀಹಾರವನ್ನೇ
ನಟಿಗೆ ಜಯಮಾಲೆ ಹಾಕಿದ
ಅವರು
ನ್ಯಾಯದೇವರೇ
ಕಿವುಡಾಗುವಂತೆ ಜಾಗಟೆ
ಬಾರಿಸಿ
ಮತ್ತೊಂದು ಪೂಜೆ
ಮುಗಿಸಿದರು…..

ಪೇಜಾವರರ ಅಂಗಳದಲ್ಲಿ
ನಿಂತು ,
ದಲಿತರ ಮನೆಯ ಬಾಡೂಟದ
ಸಮಾನತೆಯ ಸವಿ ಸುರಿದು
ಮಾರಿದಳು

ಕನಕನ ಕಿಂಡಿಯಿಂದಲಾದರೂ
ಶ್ರೀ ಕೃಷ್ಣ ಜನಿವಾರ ಬೇಡಿಯಾನು
ಅಂತ ಕಾಯುತ್ತಿರುವ
ಪೇಜಾವರರು
ಉಪವಾಸಕ್ಕೆ ಕುಂತರು….

ಮುಖ್ಯಮಂತ್ರಿ ಗಾದಿಯಂಬ
ಗದ್ದುಗೆಯ ಮುಂದೆ ನಿಂತು
ಅಧಿಕಾರ ವೈರಾಗ್ಯ
ಮಾರಲು ಹೋದರೆ…
ಅಷ್ಟರಲ್ಲಾಗಲೇ ಅಲ್ಲಮನ
ವಚನಗಳ ಉರು ಹೊಡೆಸಲಾಗುತ್ತಿತ್ತು….

ಯಾರ ಮನೆಗೆ
ಟಿಪ್ಪುವಿನ ಖಡ್ಗ ಹೋಗಬೇಕೋ…
ಯಾರ ಬೀದಿಗೆ
ನಮಾಜಿನ ಫಲ ಬೀಳಬೇಕೋ…
ಯಾರ ಸೂರಿಗೆ
ಆಶಯಗಳ ಛಾವಣಿ ಬೇಕೋ…
ಅದನ್ನೆಲ್ಲ ಅಲ್ಲಲ್ಲೇ
ಕೊಂಡೊಯ್ದು
ಅಂಗಡಿ ಹಾಕಿದಳು….

ಧಮ್ಮ ಸ್ಥಳದ ನ್ಯಾಯದ
ಗಂಟೆಯ ಗಂಟು
ಕಳಚಿ ಬಿತ್ತು…..

ಸೂಜಿಯ ಕೊಂದು ಅವಳ
ಬದುಕಿನ ವ್ಯಾಪಾರದ
ಶಟರ್ ಎಳೆಯಲಾಗಿತ್ತು…….

ಮಗಳೇ
ಕೊಂದದ್ದು ನಿನ್ನನ್ನಲ್ಲ
ನನ್ನಂತಹ ಅಪ್ಪಂದಿರ
ಅಂತರಂಗವನ್ನ,
ಅವರು ಹರಿದದ್ದು ನಿನ್ನ
ಶೀಲವನ್ನಲ್ಲ
ಕೋಟಿ ಅಣ್ಣಂದಿರ
ಕೈಗೆ ಕಟ್ಟಿದ ರಕ್ಷೆಯ
ಬಂಧನವನ್ನ……

ಹಾಳಾದ್ದು ನಿನಗೊಂದು
ಲೈಕ್ ಒತ್ತೋಣವೆಂದರೆ…
ನಿನ್ನ ಹೆಣದ ಹೆಸರಿನ ಖಾತೆ
ತೆರೆಯಲಾಗಿದೆ…

ಏನು ಮಾಡಲಿ
ನಿನ್ನ ವ್ಯಾಪಾರ
ನಾನು ಮುಂದುವರಿಸುವೆ
ಬಿಡು…….

ಕಪ್ಪು ಹುಡುಗನ ಹೋಳಿ ಹಾಡು

ಹೌದು ಸ್ವಾಮಿ,
ನಾವು ಕಪ್ಪುಜನ…
ನಮ್ಮ ಕಣ್ಣುಗಳಲ್ಲಿ
ಹರಿದ ಕಂಬನಿಯೂ
ಬಿಳಿಯಲ್ಲ…

ನಮ್ಮ ನೆಲದಾಕಾಶ
ಧ್ವನಿ, ರಕ್ತ
ಹೆಜ್ಜೆ, ಗರ್ಭಗಳು,
ಗೋರಿಗಳು,
ಯೌವನಗಳು,
ಯಾತನೆಗಳು,
ಎಲ್ಲವೂ ಕಪ್ಪೇ….

ನೀವು,
ಕಪ್ಪಲ್ಲದವರು
ಬಿಳಿಯ ಕ್ರೋಮೋಸೋಮಿನವರು

ಗುಲಾಮಗಿರಿ
ದೌರ್ಜನ್ಯ
ಶೋಷಣೆ
ವಿಕೃತಿ
ಅಸಮಾನತೆಗಳ
ಬಣ್ಣಗಳನು
ನಮ್ಮ ಮೇಲೆ
ಶತಶತಮಾನಗಳಿಂದ
ಎರಚುತ್ತಲೇ ಇದ್ದೀರಿ…

ಆದರೆ
ನಾವು ಕೊಡುವ
ಬೆಳಕಿನ ಬಣ್ಣ
ಕತ್ತಲೆಯದಲ್ಲ…
ನಮ್ಮ ಹುಟ್ಟು ಕೊಟ್ಟ
ಕಪ್ಪು ಚರ್ಮದ ಮೇಲೆ
ನಿಮ್ಮ ಬಗೆಬಗೆಯ
ಬಣ್ಣಗಳನೆಲ್ಲ ಚೆಲ್ಲಿ
ಬದುಕಿನುದ್ದಕೂ
ಆಡಿ..
Wish You Happy Holi!

ನಿಮ್ಮ ಬಣ್ಣಗಳು ಖಾಲಿಯಾಗದಿರಲಿ
ನಮ್ಮ ಕಪ್ಪು ನಮಗಂತೂ
ಬೇಲಿಯಲ್ಲ..

ನಿಮ್ಮ ಕಾಮನೆಗಳು ಕೊಂದದ್ದು
ನಮ್ಮ ಹುಣ್ಣಿಮೆಯನ್ನು
ಅಷ್ಟೇ…